top of page
Search

ಲಿಂಗಣ್ಣನವರೊಂದಿಗಿನ ಸಂದರ್ಶನದ ಮಿಣುಕುಗಳು

Excerpts of an interview of Dr. Simpi Linganna with Kannada daily 'PRAJA VANI'


ಅಖಿಲ ಭಾರತ 62ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ನಿಮ್ಮನ್ನು ಆರಿಸಿದ ವಿಷಯ ತಿಳಿದಾಗ ನಿಮಗೆ

ಹೇಗೆನಸಿತ್ತು? "ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆ ಆದ ಬಗ್ಗೆ ಟೆಲಿಗ್ರಾಮ್ ಬಂತು. ನಾನು... ಮನೆಯಲ್ಲಿರಲಿಲ್ಲ ಹಾಂ...

ಮನೆಯಲ್ಲಿ ಇರಲಿಲ್ಲ. ಅಪೇಕ್ಷಣೀಯವೇ.... ತುಂಬಾ ಹಿಗ್ಗಿನ ವಿಷಯ. ಖುಷಿಯಾಯ್ತು; ಆಗದೇ ಇರುತ್ತಾ? (ನಗು) ಇಲ್ಲದಿದ್ದರೆ ಅದರ ಸಲುವಾಗಿ (ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಸಲುವಾಗಿ) ಮತ್ತೊಮ್ಮೆ ಹುಟ್ಟಿ ಬರಬೇಕಾಗುತ್ತಿತ್ತಲ್ಲ! ಹೋಗುವಾಗ... ಒಂದು ಕೆಲಸ ಉಳಿಸಿ ಹೋದ ಹಾಗೆ ಆಗುತ್ತಿತ್ತು, (ನಗು) ಈಗ ಆಯ್ಕೆ ಮಾಡಿದ್ದಾರೆ. 10-13 ವರ್ಷಗಳಿಂದ ಕಾದಿದ್ದೇನೆ ನೋಡಿ. ಆದರೆ, ಈಗ ಉತ್ಸಾಹ, ಸವಲತ್ತು ಕಡಿಮೆಯಾಗಿದೆ. (ಹಾಗೆ ನೋಡಿದರೆ) ನನಗೆ ಸ್ವಲ್ಪ ಹೆಚ್ಚೇ ಗೌರವ ಸಂದಿದೆ ಅನ್ಸುತ್ತೆ. ಈಗ ಅಧ್ಯಕ್ಷತೆ ಹುದ್ದೆಗೆ ನಾನು ಸೂಕ್ತವೇ ಅಂತಲೂ ಅನಿಸುತ್ತೆ...." ಬರವಣಿಗೆ ಹೇಗೆ ಸಾಗಿದೆ?

ಈಗಲೂ ಬರೆಯುವುದು ಬಿಟ್ಟಿಲ್ಲ. ಹುಬ್ಬಳ್ಳಿಯ ಪತ್ರಿಕೆಯೊಂದರಲ್ಲಿ 'ಸತ್ಯ ಕಥೆಗಳು' ಅಂತ ಪ್ರತೀವಾರ ಬರ್ತಿದೆ ನೋಡಿ (ಗತಕಾಲದ ಹಳ್ಳಿಯ ಜನ, ಜೀವನದ ಚಿತ್ರಣ ಬಿಂಬಿಸುವುದು) ಬರೆಯದೇ ಹೇಗೆ ಇರುವುದು? ಕಣ್ಣು ಸ್ವಲ್ಪ ತೊಂದರೆ ಕೊಟ್ಟಿತ್ತು. ಎರಡು ವರ್ಷದ ಹಿಂದೆ ಡಾಕ್ಟರು ಕಣ್ಣಿನ ಆಪರೇಷನ್ ಮಾಡಿದರು. ಈಗ ಪರವಾಯಿಲ್ಲ. ಪ್ರತಿದಿನ ಬೆಳಿಗ್ಗೆ ಎದ್ದು ಆಸನಗಳನ್ನು ಹಾಕುತ್ತಿದ್ದೆ. ಪ್ರಾಣಾಯಾಮ ಮಾಡುತ್ತಿದ್ದೆ. ಕಣ್ಣಿನ ಆಪರೇಷನ್ ಆದ ಬಳಿಕ ಡಾಕ್ಟರು ಬೇಡ ಎಂದ್ರು ಹಾಗಾಗಿ ಈಗ ಬಿಟ್ಟಿದ್ದೇನೆ.... ಯಾವ ಚಟವೂ ಇಲ್ಲ . ಸಿಗರೇಟು?

ಒಂದೊಮ್ಮೆ ನಾಟಕದೊಳಗೆ ವಿವೇಕಾನಂದರ ಪಾತ್ರದಾಗ ಸಿಗರೇಟು ಹಚ್ಚಿದ್ದೆ. ಮಧುರಚೆನ್ನರು ಪರಮಹಂಸ- ನಾನು ವಿವೇಕಾನಂದ. ಮುಗಳಿ, ಬೇಂದ್ರೆ ಎಲ್ಲಾ ಬಂದಿದ್ರು ನಾಟಕ ನೋಡೋದಕ್ಕೆ. ಚೆನ್ನಾಗಿ ಆಯ್ತು. ನಿಮ್ಮ ನಾಟಕವೊಂದು ಹಿಂದೆ ಭಾರಿ ವಿವಾದ ಎಬ್ಬಿಸಿತ್ತಂತೆ, ನಿಮಗೂ ಸಾಮಾಜಿಕ ಬಹಿಷ್ಕಾರ ಹಾಕಲಾಗಿತ್ತಂತೆ , ಏನದು ಘಟನೆ? ನನ್ನ ತಂದೆ ಬಯಲಾಟದಲ್ಲಿ ದಕ್ಷಬ್ರಹ್ಮ ಪಾತ್ರ ಹಾಕುತ್ತಿದ್ದ, ಆತನ ಹೆಂಡತಿ ಪ್ರಸೂತಿಯ ಪಾತ್ರಕ್ಕೆ ಜನವೇ ಸಿಗಲಿಲ್ಲ. ಕೊರವರ ಭೀಮ... ನಮ್ಮ ಕೊರವರ ಭೀಮ ಇದ್ದಾನಲ್ಲ, ಸನಾದಿ ಚೆನ್ನಾಗಿ ಊದುತ್ತಿದ್ದ. ಅವನಿಗೇ ಪ್ರಸೂತಿ ಪಾತ್ರ ನೀಡಿದರು. ಒಂದು ದೃಶ್ಯದಲ್ಲಿ ಪ್ರಸೂತಿ ದಕ್ಷಬ್ರಹ್ಮನ ತೊಡೆಯ ಮೇಲೆ ಕೂರಬೇಕು. ನಮ್ಮ ಅಪ್ಪನ ತೊಡೆಯ ಮೇಲೆ ಕೊರವರ ಭೀಮ??. (ನಗು) ಊರ ಜನರಿಗೆ ಅಸಹ್ಯ ಅನ್ನಿಸಿತು. ಮುಂದೆ ನಾನು 'ಮರೆ ಮುಚ್ಚುಕ' ನಾಟಕ ಬರೆದೆ. ಕನ್ನಡ ಶಾಲೆಯ ಕೊನೆಯ ತರಗತಿಯಲ್ಲಿದ್ದೆ. ಹಿಂದೂ- ಮುಸ್ಲಿಂ ಹರಿಜನ ಉದ್ಧಾರದ ಬಗ್ಗೆ ನಾಟಕ. ಯುಗಾದಿಯ ದಿವಸ, ಸುಮಾರು ಮೂರೂವರೆ ಸಾವಿರ ಜನ ಸೇರಿದ್ದರು. ಎರಡು ಅಂಕ ನೋಡಿ ಜನ ಭಲೇ ಭಲೇ ಅಂದು, ಮೂರನೆಯ ಅಂಕದಲ್ಲಿ ಹರಿಜನರ ಜತೆ ಸಹಪಂಕ್ತಿ, ನೈಜತೆ ಬರಲೆಂದು ವೇದಿಕೆ ಕೆಳಗಿದ್ದ ಹರಿಜನ ಗೆಳೆಯರನ್ನೆಲ್ಲ ಮೇಲೆ ಹತ್ತಿಸಿ ಸಹಪಂಕ್ತಿ ಮಾಡಿದೆವು. ಜನ ಛೀ.. ಥು.. ಎಂದು ಉಗುಳಿದರು. ನನ್ನ ಜಾತಿಯವರು. ಕುಟುಂಬದವರು ಎಲ್ಲ ಎದ್ದು ಹೊರಟರು. ಗಲಾಟೆ ಆಯ್ತು, ನಾಟಕ ಮುಗೀತು. ಈ ನಾಟಕದ ಕಥೆ ಇಷ್ಟು ಸರಳವಾಗಿ ಮುಗಿಯಲಿಲ್ಲ. ಆಗ ನಾನು ಊರಿನಲ್ಲಿ ನೂಲಿಗೆ ಬಣ್ಣ ಹಾಕುವ ಕೂಲಿ ಕೆಲಸಕ್ಕೆ ಹೋಗುತ್ತಿದ್ದೆ. ಈ ನಾಟಕ ಆದ ಬಳಿಕ ಊರವರು ಕೂಲಿಗೂ ಕರೆಯುವುದನ್ನು ನಿಲ್ಲಿಸಿದರು. ಸಾಮಾಜಿಕ ಬಹಿಷ್ಕಾರದ ಬೆದರಿಕೆ ಒಡ್ಡಿದರು. ನಿಮ್ಮ ಬರಹಗಳ ಆರಂಭದ ದಿನಗಳು.... `ವಾಗ್ವಿಲಾಸ' ಭವನ ಅಂತ ನಮ್ಮ ಲೈಬ್ರರಿ. 1923 ರಲ್ಲಿ, ಊರೊಳಗೇ ನಾಲ್ಕು ಜನ ಗೆಳೆಯರು ಸೇರಿ ಸ್ಥಾಪಿಸಿದ ವಾಚನಾಲಯ. ತಿಂಗಳಿಗೆ ಒಂದು ರೂಪಾಯಿ ಬಾಡಿಗೆ. ಹಗಲು ಸೀರೆ ನೇಯವುದು, ರಾತ್ರಿ ಗ್ರಂಥಾಲಯದಲ್ಲಿ ಮಲಗುವುದು. ಅಲ್ಲೇ ಎಲ್ಲಾ ಚರ್ಚೆ. 'ಮುದ್ದು' ಎಂಬ ಕೈ ಬರಹದ ಮಾಸಪತ್ರಿಕೆ ಆರಂಭ. ಬರಹಗಳನು ಬರೆದು ' ಜೈ ಕರ್ನಾಟಕ'ದ ವೆಂಕಟರಾಯರಿಗೆ ಕಳಿಸಿದೆ. ಅವರು ತಮ್ಮ ಪತ್ರಿಕೆಯಲ್ಲಿ ಸ್ವೀಕಾರ ಬರೆದರು "ಇನ್ನಷ್ಟು ಕಳಿಸಿ ಪ್ರಕಟಿಸುತ್ತೇನೆ” ಎಂದು ಬರೆದರು. ಧೈರ ಬಂತು. ಹೀಗೆ ಕಂಡಕಿ ಸುತ್ತೋದು, ನೆಯೋದು ಮತ್ತು ಬರೆಯುವದು. ಶ್ರೀ ಅರವಿಂದರ ಒಂದು ಪುಸ್ತಕ ಕೈಗೆ ಸಿಕ್ಕಿತ್ತು, ಓದಿದಾಗ ನನ್ನ ತಿಳುವಳಿಕೆ ಕಡಿಮೆ ಅನ್ನಿಸಿ ಬಂಗಾಳಿ ಕಲಿಯಬೇಕೆನ್ನಿಸಿತು. ಪಂಡಿತ ಈಶ್ವರಚಂದ್ರರ ಬಂಗಾಳಿ ಭಾಷೆ ಬಗೆಗಿನ ಪುಸ್ತಕ ಹಿಡಿದು, ಮರಾಠಿ ಅಕ್ಷರದ ಮೇಲಿಂದ ಬಂಗಾಳಿ ಭಾಷೆ ಗುರುತಿಸಿ ಹಾಗೂ ಹೀಗೂ ಓದಿದ್ದು. ರಾಮತೀರ್ಥರ ಎರಡು ಪುಸ್ತಕ... ಹುಂ... ಆಧ್ಯಾತ್ಮ... ಪುಸ್ತಕ ನನಗೆ ಹುಚ್ಚು ಹಿಡಿಸ್ತು. ರಾಮತೀರ್ಥರ 'ಸುಖದ ನೆಲೆ' ಎಂಬ ಪುಸ್ತಕ ಓದಿದೆ. ಬಹಳ ಪ್ರಭಾವ ಬೀರಿತು. ಅವರ ಉಪನ್ಯಾಸದ 20 ಸಂಪುಟಗಳು ಮರಾಠಿಯಲ್ಲಿ ಬಂದಿದ್ದವು. ನನ್ನ ಓದುವ ಹುಚ್ಚು ನೋಡಿ ನಾಗಪ್ಪ ಕೇಶೆಟ್ಟಿ ಎಲ್ಲಿಂದಲೋ ತರಿಸಿಕೊಟ್ಟ....” ಹೀಗೆ ನಮ್ಮ ಓದು ಬರಹ. ಸ್ವಾತಂತ್ರ್ಯ ಹೋರಾಟದ ಬಿಸಿ ನಿಮಗೆ ತಟ್ಟಲಿಲ್ಲವೆ? ಸ್ವಾತಂತ್ರ್ಯ ಹೋರಾಟದಲ್ಲಿ ನಾನು ಭಾಗವಹಿಸಲಿಲ್ಲ, ನೇರವಾಗಿ ಭಾಗವಹಿಸಲಿಲ್ಲ. ಶಿಕ್ಷಕನಾಗಿ ಸರ್ಕಾರಿ ಚಾಕರಿ ಮಾಡುತ್ತಿದ್ದೆ. ನೋಡಿ, ಸರ್ಕಾರಿ ನೌಕರ ಏನು ಮಾಡೋದು? ಆದರೆ ದೂರದ ಹಳ್ಳಿಗಳಿಗೆ ಹೋಗಿ ಬೇರೆ ತರಹದಲ್ಲಿ ಉಪನ್ಯಾಸ ನೀಡಿದ್ದು ಉಂಟು. ತೊಂದರೆನೂ ಆಯ್ತು. ನನ್ನ ವಿರುದ್ಧ ಯಾರೊ ಕಂಪ್ಲೇಂಟು ಮಾಡಿದ್ದರು. ಹರ್ಡೇಕರ್ ಅವರನ್ನು, ಮೋರೆ ಅವರನ್ನು, ಮಂಗಳವೇಡೆ ಅವರನ್ನು ಚಡಚಣಕ್ಕೆ ಕರೆಸಿ ಕುದುರೆ ಮೇಲೆ ಕೂರಿಸಿ ಮೆರವಣಿಗೆ ತೆಗೆದಿದ್ದೆವು. ದೊಡ್ಡ ಮೆರವಣಿಗೆ, ಸಾವಿರಗಟ್ಟಲೆ ಜನ ವಿಜಾಪುರ ಜಿಲ್ಲೆಯಲ್ಲೇ ದೊಡ್ಡ ಸಭೆ. ಸರ್ಕಾರಕ್ಕೆ ಗೊತ್ತಾಗದೆ ಇರುತ್ತಾ? ನನ್ನ ಕೆಲಸ ಹೋಗಲಿಲ್ಲ; ಊರಿನ ಛೇರ್ಮನ್ನರು ತಡೆದರು. ಆದರೆ ನೀರಿಲ್ಲದ ಊರಿಗೆ (ಇಂಗಳೇಶ್ವರಕ್ಕೆ) ವರ್ಗ ಮಾಡಿದ್ರು. ನೀವು ಜಾನಪದದ ಬಗ್ಗೆ ಇಷ್ಟೊಂದು ಒಲವು ಮೂಡಿಸಿಕೊಂಡಿದ್ದರ ಹಿನ್ನೆಲೆ "ನಾ ಹುಟ್ಟಿ ಬೆಳೆದಿದ್ದ ಜಾನಪದ ಪರಿಸರದಾಗ ಮಕ್ಕಳ್ನ ಆಡಿಸೋವಾಗ, ಎರಿವಾಗ, ಮಲಗಿಸೋವಾಗ, ಹೀಂಗ ಸಣ್ಣವನಾಗಿರುವಾಗಿನಿಂದ ಹೆಜ್ಜಿ ಹೆಜ್ಜಿಗೂ ಹಾಡ ಕೇಳಕೊಂತಾನೇ ಬೆಳೆದ್ನಿ". "ಯಾವದು ಚಲೋ 'ಇರತೈತಿ ಅದ ಕಡಿತನಕ ನೆಪ್ಪನಾಗ ಉಳಿತೈತಿ. ಮುಂದ ಮದುವಿ, ಮುಂಜಿವಿ, ಹೆಣ್ಣಹುಡಗಿ ಮೈನೆರೆದಾಗ, ಕೂಸಿಗಿ ತೊಟ್ಟಲಾಗ ಹಾಕೋವಾಗ, ಯಾವಾದ ಸಮಾರಂಭ ಇರಲಿ, ಹಾಡ ಇರೋದ. ಬೀಸುವಾಗ,ಕುಟ್ಟುವಾಗ, ಹೊಲ ದಾಗ ನೀರುಹಾಸುವಾಗ, ಹಂತಿ ಕಟ್ಟುವಾಗ ಹೀಂಗ ಬದುಕಿನ ತುಂಬೆಲ್ಲಾ ಜನಪದ ತುಂಬಕೊಂಡ ಬೆಳದ್ವಿ ನಾವು”. ನಾ ಕೇಳಿದ ಮೊದಲನೇ ಜಾನಪದಹಾಡು, ಇನ್ನೂ ನೆನಪು ಐತಿ. ಕರಿಯಂಗಿ ಕಸೂತಿ ತಲೆತುಂಬಾ ಜಾವೂಳ ಅಂಗಳದಾಗ ನವಿಲಾಟ ಅದಕಿಂತ ಲಿಂಗಯ್ಯನಾಟ ಬಲುಮಾಟ ಬೆಳೆದಂತೆ ಕರಡಿ ಮಜಲು, ಭಜನಿ ಮೇಳ, ಬಯಲಾಟ, ಓಣಿಯ ಸೋಗುಗಳು, ಮದುವೆ, ಶೋಭನ, ಲಾವಣಿ , ಮೊಹರಂ ಹೀಗೆ ಜನಪದ ಹುಚ್ಚು ಬೆಳೆಯುತ್ತ ಹೋಯಿತು. ಕೃಪೆ : ಕೃತಜ್ಞತೆಗಳು ಶ್ರೀ ಹನೀಫ್ ರಿಗೆ , ಛಾಯಾಚಿತ್ರಗಾರ ಅನಿಲಕುಮಾರ ಗಾಯಕವಾಡ ರವರಿಗೆ ಮತ್ತು ಪ್ರಜಾವಾಣಿಯ ಸಮಸ್ತ ಮಂಡಳಿಗೆ. ಶ್ರೀ ಬಿ.ಎಂ. ಹನೀಫ್ ರ ಜೊತೆಗಿನ ಸಂದರ್ಶನದ ಆಯ್ದ ಭಾಗಗಳು .

 
 
 

1 Comment


jayakumarcsj
May 07, 2022

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ

Like
Post: Blog2_Post

©2021 by Dr. Simpi Linganna. Proudly created with Wix.com

bottom of page